ಜೋಡಣೆ -
ಸಮಗ್ರ ರಚನೆಯ ಆಲೇಖ್ಯಕ್ಕೆ ಹೊಂದುವಂತೆ ತಯಾರಿಸಿದ ವಿವಿಧ ಬಿಡಿಭಾಗಗಳನ್ನು ಕ್ರಮಬದ್ಧವಾಗಿ ಅಳವಡಿಸುವಿಕೆ (ಫ್ಯಾಬ್ರಿಕೇಷನ್). ವಾಸ್ತವವಾಗಿ ಮನೆ ಮುಂತಾದ ಕಟ್ಟಡಗಳಿಂದ ತೊಡಗಿ ಬೃಹತ್ ಯಂತ್ರಸ್ಥಾವರಗಳವರೆಗೆ ಇಂದು ಜೋಡಣೆ ರಚನೆಯೇ ಬಳಕೆಯಲ್ಲಿರುವುದು ಸಾಮಾನ್ಯ. ಉದಾಹರಣೆಗೆ ಮೋಟಾರು ಕಾರ್ ಇಲ್ಲವೇ ಟ್ರಕ್ ನಿರ್ಮಾಣದ ಸ್ಥಾವರವನ್ನು ಪರಿಶೀಲಿಸಬಹುದು. ಮೊದಲೇ ಏರ್ಪಡಿಸಿದಂಥ ಒಂದು ಆಲೇಖ್ಯಕ್ಕೆ ಹೊಂದುವ ಅಸಂಖ್ಯಾತ ಬಿಡಿಭಾಗಗಳು ಬೇರೆ ಬೇರೆ ಕಾರ್ಖಾನೆಗಳಲ್ಲಿ ತಯಾರಾಗಿ ಈ ಸ್ಥಾವರಕ್ಕೆ ಪೂರೈಕೆ ಆಗುತ್ತದೆ. ಇಲ್ಲಿ ಅವನ್ನು ಸಾಗುಪಟ್ಟಿ (ಕನ್ವೇಯರ್ ಬೆಲ್ಟ್) ಕ್ರಮದಿಂದ ಜೋಡಿಸಿ ಇಡೀ ಯಂತ್ರದ ರಚನೆ ಆಗುತ್ತದೆ. ಪ್ರಪಂಚದ ಎರಡು ಮಹಾಯುದ್ದಗಳ ಕಾಲಗಳಲ್ಲಿ ಸರಕು ಸಾಗಣಿಯ ಮತ್ತು ಸಮರೋದ್ಧೇಶದ ಹಡಗುಗಳ ತೀವ್ರ ಅವಶ್ಯಕತೆ ತಲೆದೋರಿದಾಗ ಪೂರ್ವಜೋಡಣೆಯ ವಿಧಾನವನ್ನು ಬಳಕೆಗೆ ತಂದುದರಿಂದ ಕಾಲದ ಉಳಿತಾಯವಾಗಿ ಬೇಗನೆ ಸಿದ್ಧವಸ್ತುಗಳು ದೊರೆಯುವಂತಾಯಿತು. ಪೂರ್ವನಿರ್ಮಿತ ಮನೆಗಳ ನಿರ್ಮಾಣವೂ ಇಂದು ನಗರಗಳಲ್ಲಿ ಜನಪ್ರಿಯವಾಗಿದೆ.
(ಬಿ.ಆರ್.ಎನ್.)
ಪರಿಷ್ಕರಣೆ:
ಎಂ. ಜಿ. ಶ್ರೀನಿವಾಸನ್
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ